ಕಂಚೂಲಿಯರು : ಶಾಕ್ತೇಯರಲ್ಲಿ ಒಂದು ಗುಂಪಿನವರು. ಮದರಾಸು ಮತ್ತು ಬೊಂಬಾಯಿ ಪ್ರಾಂತ್ಯಗಳಲ್ಲಿ ವಿಶೇಷವಾಗಿದ್ದಾರೆ. ಮದರಾಸು ಭಾಗದಲ್ಲಿ ಇವರನ್ನು ಕಂಚೂಲಿಯರು ಎಂದು ಕರೆಯುತ್ತಾರೆ. ಕಂಚೂಲಿಯರು ವಾಮಪಕ್ಷಕ್ಕೆ ಸೇರಿದವರು. ಮದ್ಯಸೇವನೆ, ಮಾಂಸಭಕ್ಷಣ ಮತ್ತು ಸ್ವೇಚ್ಛಾರತಿ ಇವರ ಮತಾಚಾರಗಳಲ್ಲಿ ಮುಖ್ಯವಾದುವು. ಇವರು ತಮ್ಮದೇ ಆದ ರಹಸ್ಯಕೂಟಗಳಲ್ಲಿ ಸೇರಿ ಘಟಕಂಚುಕಿ, ಎಂದರೆ ಗಡಿಗೆ ಮತ್ತು ರವಿಕೆ ಎಂಬ ವ್ರತವನ್ನು ಆಚರಿಸುತ್ತಾರೆ. ಈ ರಹಸ್ಯಕೂಟದಲ್ಲಿ ಗಂಡಸರ ಮತ್ತು ಹೆಂಗಸರ ಸಂಖ್ಯೆ ಸಮನಾಗಿರುತ್ತದೆ. ಅಲ್ಲಿ ಸೇರಿದ ಹೆಂಗಸರೆಲ್ಲ ತಮ್ಮ ಕುಪ್ಪುಸಗಳನ್ನು ಬಿಚ್ಚಿ ಪುಜಾಸ್ಥಳದ ನಡುವೆ ಇಟ್ಟಿರುವ ಗಡಿಗೆಯಲ್ಲಿ ಹಾಕುತ್ತಾರೆ. ಅನಂತರ ಭಕ್ತಾದಿಗಳು ದೇವರ ಪ್ರಸಾದ ರೂಪವಾಗಿ ಮಾಂಸವನ್ನು ಭಕ್ಷಿಸಿ ಮದ್ಯಸೇವನೆ ಮಾಡುತ್ತಾರೆ. ಅನಂತರ ಒಬ್ಬೊಬ್ಬ ಗಂಡಸೂ ಗಡಿಗೆಯಲ್ಲಿರುವ ಒಂದು ಕುಪ್ಪುಸವನ್ನು ತೆಗೆಯುತ್ತಾನೆ. ಆ ಕುಪ್ಪುಸತೊಟ್ಟಿದ್ದವಳೊಡನೆ ಅವನು ಆ ರಾತ್ರಿ ಕಳೆಯುತ್ತಾನೆ.	(ಜಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ